(Comments)

ಮಿಸೈಲ್​ ಜನಕನಿಗೆ 4 ನೇ ವರ್ಷದ ಶ್ರದ್ಧಾಂಜಲಿ, ಟ್ವಿಟರ್​ ನಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್​ ಕಲಾಂರ ಅವಿಸ್ಮರಣೀಯ ನೆನಪುಗಳ ಮೆಲುಕು

ಭಾರತದ 11 ನೇ ರಾಷ್ಟ್ರಪತಿಯಾಗಿ ದೇಶದ ಗಮನ ಸೆಳೆದ ಕಲಾಂರು ನಮ್ಮನ್ನು ಅಗಲಿ 4 ವರ್ಷಗಳು ಸಂದಿವೆ.

ಕ್ಷಿಪಣಿಯ ಮಾನವ ಅಥವಾ ಕ್ಷಿಪಣಿಯ ಜನಕ ಎಂದೇ ಕರೆಯಲ್ಪಡುವ ಅವುಲ್​ ಫಕೀರ್​ ಜೈನುಲಾಬ್ದೀನ್​ ಅಬ್ದುಲ್​ ಕಲಾಂ ತಮ್ಮ ಸರಳತೆಯ ಮೂಲಕವೇ ಭಾರತೀಯ ಹೃದಯ ಸಾಮ್ರಾಜ್ಯವನ್ನು ಅಲಂಕರಿಸಿದ್ದರು. ಅವರು ಶನಿವಾರ, ಜು.27 ಕ್ಕೆ ಇಹಲೋಕ ತ್ಯಜಿಸಿ 4 ವಸಂತಗಳು ಕಳೆದಿವೆ.

abdul kalam

ಭಾರತದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್​ ಕಲಾಂ 2015ರ ಜುಲೈ 27 ರಂದು ಭಾರತೀಯರನ್ನು ದುಃಖದ ಕಡಲಿಗೆ ನೂಕಿದ್ದರು. 83ರ ಇಳಿ ವಯಸ್ಸಿನಲ್ಲಿಯೂ ತಮ್ಮ ನೆಚ್ಚಿನ ಅಧ್ಯಾಪನ ವೃತ್ತಿ ಮಾಡುತ್ತಲೇ ಕುಸಿದು ಬಿದ್ದರು. ಒಂದು ಕ್ಷಣ ಎಲ್ಲರ ಎದೆ ಝೆಲ್ಲೆಂದಿತು. ಏನಾಯಿತೆಂದು ನೋಡುವಷ್ಟರಲ್ಲಿ ಡಾ.ಕಲಾಂ ಅವರ ಪ್ರಾಣಪಕ್ಷಿ ಅಂತರಿಕ್ಷಕ್ಕೆ ಹಾರಿತ್ತು.

ರಾಷ್ಟ್ರಕಂಡ ಧೀಮಂತ ನಾಯಕ ಮತ್ತು ಜನರ ಪ್ರೀತಿ ಪಾತ್ರರಾಗಿದ್ದ ಕಲಾಂ ಅವರಿಗೆ ರಾಷ್ಟ್ರ ನಾಯಕರು ಟ್ವಿಟರ್​​ ನಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅಬ್ದುಲ್​ ಕಲಾಂರಿಗೆ ಗೌರವ ನಮನ ಸಲ್ಲಿಸಿದ್ದಾರೆ.
"ಮಾಜಿ ರಾಷ್ಟ್ರಪತಿ, ಮಿಸೈಲ್​ ಮಾನವ ಎಂದು ಹೆಸರು ಪಡೆದ ಭಾರತ ರತ್ನ ಡಾ.ಅಬ್ದುಲ್​ ಕಲಾಂ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಲಕ್ಷಾಂತರ ಯುವಜನರಿಗೆ ಅವರ ಕೊಡುಗೆ ಸ್ಪೂರ್ತಿಯಾಗಿದೆ," ಎಂದು ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್​ ನ ನಾಯಕಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಚಿವ ರವಿ ಶಂಕರ್​ ಪ್ರಧಾನ್​, ಪಂಜಾಬ್​ ನ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರೀಂದರ್​ ಸಿಂಗ್​, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಉಕ್ಕಿನ ಸಚಿವ ಧರ್ಮೇಂದ್ರ ಪ್ರಧಾನ್​ ಮತ್ತು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಅಬ್ದುಲ್​ ಕಲಾಂರನ್ನು ಸ್ಮರಿಸಿದ್ದಾರೆ.

ಇನ್ನೂ ಅನೇಕರು ಅಬ್ದುಲ್​ ಕಲಾಂರ ಸರಳತೆ ಮತ್ತು ಅವರ ಸಂದೇಶಗಳನ್ನು ಹಂಚಿಕೊಂಡಿದ್ದಾರೆ.

ಅಬ್ದುಲ್​ ಕಲಾಂ ಬಗ್ಗೆ

ಅಬ್ದುಲ್​ ಕಲಾಂ ತಮಿಳುನಾಡಿನ ರಾಮೇಶ್ವರಂನಲ್ಲಿ 1931ರ ಅಕ್ಟೋಬರ್​ 15 ರಂದು ಜನಿಸಿದರು. ಭೌತಶಾಸ್ತ್ರ ಮತ್ತು ಅಂತರಿಕ್ಷಯಾನದಲ್ಲಿ ಎಂಜಿನಿಯರಿಂಗ್​ ಪದವಿ ಪಡೆದರು. ನಂತರದ ನಾಲ್ಕು ದಶಕಗಳು ಅವರು ವಿಜ್ಞಾನಿ ಮತ್ತು ವಿಜ್ಞಾನ ಆಡಳಿತ ಸಲಹೆಗಾರರಾಗಿ ಕಾರ್ಯನಿರ್ವಹಿಸಿದರು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ ಡಿಒ) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹಾಗೂ ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳು ಮತ್ತು ಸೇನೆಯ ಕ್ಷಿಪಣಿ ಅಭಿವೃದ್ಧಿಯಲ್ಲಿ ಕಾರ್ಯನಿರ್ವಹಿಸಿದರು. ಆದ್ದರಿಂದಲೇ ಇವರನ್ನು ಭಾರತದ ಕ್ಷಿಪಣಿಯ ಜನಕ ಎಂದು ಕರೆಯುತ್ತಾರೆ. ಭಾರತೀಯ ಅಭಿವೃದ್ಧಿಯಲ್ಲೂ ಕಲಾಂ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರು 1998ರಲ್ಲಿ ಭಾರತದ ಪ್ರೋಕ್ರಾನ್​ 2 ರ ಅಣು ಪರೀಕ್ಷೆಯಲ್ಲಿ ಒಬ್ಬ ಸಂಘಟಕ, ತಂತ್ರಜ್ಞರಾಗಿ ಬಹಳ ಮುಖ್ಯ ಪಾತ್ರ ನಿರ್ವಹಿಸಿದರು. ಇದಕ್ಕೂ ಮೊದಲು 1974ರಲ್ಲಿ ಭಾರತದ ಮೊದಲ ಅಣು ಪರೀಕ್ಷೆ ನಡೆಯಿತು.
ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಕೊಡುಗೆ ನೀಡಿರುವ 11ನೇ ರಾಷ್ಟ್ರಪತಿ ಕಲಾಂ ರವರಿಗೆ ಭಾರತ ರತ್ನ ನೀಡಿ ಗೌರವಿಸಲಾಗಿದೆ. ಭಾರತದಲ್ಲಿ ಕ್ಷಿಪಣಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಕೆಯಾಗಲು ಕಾರಣರಾದರು. 2002 ರಿಂದ 2007ರವರೆಗೆ ಭಾರತದ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ ಅವರು ಅಧ್ಯಕ್ಷ ಸ್ಥಾನಕ್ಕೆ ವಿಶೇಷ ಗೌರವವನ್ನು ತಂದು ಕೊಟ್ಟರು. ಪ್ರಜೆಗಳ ರಾಷ್ಟ್ರಪತಿ ಎಂದೇ ಹೆಸರಾಗಿದ್ದರು.
ಭಾರತದ ಪ್ರತಿಯೊಬ್ಬ ಪ್ರಜೆಯಿಂದ ಅವರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಸಾಮಾನ್ಯ ಜನರ ಕಷ್ಟವನ್ನು ಕೇಳಲು ಪತ್ರ ವ್ಯವಹಾರವನ್ನು ನಡೆಸುತ್ತಿದ್ದರು. ಜ್ಞಾನದ ಪ್ರತಿರೂಪದಂತಿದ್ದ ಎಪಿಜೆ ಅಬ್ದುಲ್​ ಕಲಾಂ ಒಬ್ಬ ಮಹಾನ್​ ನಾಯಕನಾದರೂ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಜೀವಿಸಿ ಭಾರತೀಯರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ.
Currently unrated

Comments